ಆರ್ಡ್‍ವಿಂಗೇಟ್
	ಶತ್ರುವಿಗೆ ಹಿಂದುಗಡೆಯಿಂದ ಕಿರುಕುಳ ಕೊಡುವ ಕಲೆಯನ್ನು ಬೆಳೆಸಿದಾತ. ಟಿ.ಇ.ಲಾರೆನ್ಸ್ ಎಂಬುವನು ಕೇವಲ ಅಲ್ಪಬಲದ ಸಹಾಯದಿಂದ ತುರ್ಕಿ ಸೈನ್ಯದ ಸಂಚಾರ ಮತ್ತು ಸಂಪರ್ಕ ವ್ಯವಸ್ಥೆಯನ್ನು ಹೇಗೆ ಧ್ವಂಸ ಮಾಡಿದನೋ ಅಂಥದೇ ಕೃತ್ಯವನ್ನು ಆರ್ಡ್‍ವಿಂಗೇಟ್ ಎರಡನೆಯ ಮಹಾಯುದ್ಧದಲ್ಲಿ ಶತ್ರು ಸೈನ್ಯದ ಹಿಂಭಾಗದಲ್ಲಿದ್ದು ಜಯಪ್ರದವಾಗಿ ಮಾಡಿದ. ದಿಲ್ಲಿಯನ್ನೂ ಕಲ್ಕತ್ತಾವನ್ನೂ ತನ್ನ ಮುಖ್ಯ ನೆಲೆಯನ್ನಾಗಿ ಮಾಡಿಕೊಂಡು ಮಧ್ಯಪ್ರಾಚ್ಯದ ರಂಗದಲ್ಲಿ ತಾನು ಕೈಕೊಂಡ ಪ್ರಯೋಗಗಳನ್ನು ಬರ್ಮದಲ್ಲಿ ಸಮಂಜಸವಾಗಿ ಮುಂದುವರಿಸಿದ. ಭಾರತವನ್ನು ಆಕ್ರಮಿಸಿದ ಉದ್ದೇಶದಿಂದ ಮುಂದುವರಿಯುತ್ತಿದ್ದ ಜಪಾನೀಯರ ಹಿಂಭಾಗದಲ್ಲಿ ಆಕಾಶಯಾನಗಳಲ್ಲೂ ಫಲಕ ವಿಮಾನಗಳಲ್ಲೂ ಸೈನಿಕರನ್ನು ತಂದು ಇಳಿಸಲಾಗುತ್ತಿತ್ತು. ಈತನೂ ಮತ್ತು ಈತನ ಅನುಯಾಯಿಗಳೂ ಆಹಾರ ಮತ್ತು ಇತರ ವಸ್ತುಗಳ ಸರಬರಾಜು ಬಹಳ ಕಡಿಮೆಯಾಗಿದ್ದರೂ ಎದೆಗುಂದದೆ ಶತ್ರುವಿನ ಆಕಾಶಯಾನಗಳು, ಮದ್ದುಗುಂಡುಗಳ ಗುಪ್ಪೆಗಳು, ಯದ್ಧ ಸಾಮಗ್ರಿಗಳು ಮೊದಲಾದುವನ್ನೆಲ್ಲ ಧ್ವಂಸ ಮಾಡುತ್ತಿದ್ದರು. ಶತ್ರುವಿನೊಂದಿಗೆ ಮಾಡಿದ ಅನೇಕ ಸಣ್ಣ ಪುಟ್ಟ ಕಾದಾಟಗಳಲ್ಲಿ ಇವರು ಅಸಂಖ್ಯ ಜಪಾನಿಯರನ್ನು ಕೊಂದರು. ವಿಂಗೇಟ್ ಹೊಸ ಪರಿಯ ಸಾಹಸದ ಈ ಯುದ್ಧ ಕ್ರಮದಲ್ಲಿ ತನ್ನ ಜೊತೆಗಾಗಿ ಶತ್ರುವಿನೊಂದಿಗೆ ಕಾದಾಡಲು ಮುಂದೆ ಬಂದ ಅನೇಕ ಮಿತ್ರವರ್ಗ ಮತ್ತು ಭಾರತದ ಸೈನಿಕರ ಸಹಿತ ಬರ್ಮ ಕಾಡುಗಳಲ್ಲಿ ಪ್ರಾಣಕೊಟ್ಟ.

(ಎ.ಎನ್.ಎಸ್.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ